ದಸರಾ -
ಆಶ್ವಯುಜ ಮಾಸದ ಶುಕ್ಲ ಪ್ರಥಮೆಯಿಂದ ದಶಮೀ ದಿನದವರೆಗೆ ನಡೆಯುವ ದುರ್ಗಾ ಪ್ರೀತಿಕರವಾದ ನಾಡಹಬ್ಬ. ಈ ಪದ ಸಂಸ್ಕøತದ ದಶಹರ ಎಂಬುದರಿಂದ ಬಂದಿದೆ. ದಶಹರ ಎಂದರೆ ಹತ್ತು ದಿನಗಳು ಎಂದರ್ಥ. ಈ ಹಬ್ಬವನ್ನು ಭಾರತದ ವಿವಿಧ ಪ್ರದೇಶಗಳಲ್ಲಿ ನವರಾತ್ರಿ, ದುರ್ಗಾಪೂಜೆ, ರಾಮಲೀಲಾ, ದೇವಿಪೂಜೆ, ನಾಡಹಬ್ಬ ಮೊದಲಾದ ಹೆಸರಿನಿಂದ ಆಚರಿಸುತ್ತಾರೆ. ಬಂಗಾಳ ಬಿಹಾರಗಳಲ್ಲಿ ಈ ಉತ್ಸವದ ವಿಜೃಂಭಣೆ ಅಧಿಕ. ಶರತ್ಕಾಲಾರಂಭದ ಈ ದಿವಸಗಳಲ್ಲಿ ಯಮದಂಷ್ಟ್ರೆಯ ಪೀಡಾ ನಿವಾರಣೆಗಾಗಿ ವಿಷ್ಣು ಶಂಕರ ಅಗ್ನಿ ಇವರ ತೇಜಸ್ಸಿನಿಂದ ಉದ್ಭವಿಸಿದ ಮತ್ತು ದೇವತೆಗಳಿಂದ ವಿವಿಧ ಆಯುಧಗಳನ್ನು ಪಡೆದಿರುವ ದೈತ್ಯಸಂಹಾರಿಣಿಯೂ ಆಷಾಢ ಪೂರ್ಣಿಮೆಯ ದಿನ ನಿದ್ರಿಸಿರುವವಳೂ ಆದ ದೇವಿಯನ್ನು ಒಂದೊಂದು ದಿನದಲ್ಲೂ ಒಂದೊಂದು ಹೆಸರಿನಿಂದ ಪೂಜಿಸಿ ಎಚ್ಚರಗೊಳಿಸಲು ಈ ಉತ್ಸವವನ್ನು ಆಚರಿಸುತ್ತಾರೆ.

	ಮಧುಕೈಟಭರನ್ನು ಕೊಂದ ಮಹಾಕಾಳಿ, ಮಹಿಷಾಸುರಮರ್ಧಿನಿಯಾದ ದುರ್ಗಿ, ಚಂಡಮುಂಡರನ್ನು ಸಂಹರಿಸಿದ ಚಾಮುಂಡಿ, ರಕ್ತಬೀಜಾಂತಕಳಾದ ಕಾಳಿ, ನಂದನಪುತ್ರಿಯೂ ಕಂಸನ ಮರಣಸೂಚಕಳೂ ಆದ ದುರ್ಗಿ, ಭಯಂಕರ ರಾಕ್ಷಸ ಸಂಹಾರಿಣಿಯಾದ ರಕ್ತದಂತಿ, ಕ್ಷಾಮನಿವಾರಕಳಾದ ಶಾಕಂಭರೀ, ದುರ್ಗನೆಂಬ ರಾಕ್ಷಸನನ್ನು ಸಂಹರಿಸಿದ ದುರ್ಗಾ, ಅರುಣನೆಂಬ ರಾಕ್ಷಸನನ್ನು ಕೊಂದ ಭ್ರಾಮರಿ ಎಂಬ ಈ ಒಂಬತ್ತು ದುರ್ಗಿಯರನ್ನು ಈ ದಿವಸಗಳಲ್ಲಿ ಕ್ರಮವಾಗಿ ಪೂಜಿಸಬೇಕು.

	ಈ ಉತ್ಸವ ಕಾಲದಲ್ಲಿ ಉಪವಾಸ ನಕ್ತ ಏಕಭಕ್ತ ಅಯಾಚಿತ-ಇವುಗಳಲ್ಲಿ ಯಾವುದಾದರೊಂದು ನಿಯಮದಿಂದರಬೇಕು. ದೇವೀಪೂಜೆ ಮಾತ್ರವಲ್ಲದೆ ಅಖಂಡದೀಪ ಪ್ರಜ್ವಲನ ಪುಷ್ಪಮಾಲಾ ಬಂಧನ ಕುಮಾರೀಪೂಜೆ ಸಪ್ತಶತೀ ಪಾರಾಯಣ-ಇವೇ ಮೊದಲಾದ ಅನೇಕ ಕರ್ಮಗಳು ಉಕ್ತವಾಗಿವೆ. ಸೂರ್ಯೋದಯ ಕಾಲದಲ್ಲಿ ಪ್ರಥಮೆ ಇರುವ ದಿವಸ ಚಿತ್ರಾನಕ್ಷತ್ರ ವೈಧೃತಿಯೋಗ-ಇವು ಇಲ್ಲದಿರುವ ಕಾಲದಲ್ಲಿ ಇದನ್ನು ಪ್ರಾರಂಭಿಸಬೇಕು. ಈ ಕಾಲ ಆ ದಿವಸ ದೊರೆಯದಿದ್ದರೆ ಅಭಿಜಿನ್ಮುಹೂರ್ತದಲ್ಲಿ ಕಲಶವನ್ನು ಸ್ಥಾಪಿಸಬೇಕು.

	ವ್ರತವನ್ನು ಆಚರಿಸುವವರು ಅಂದು ಬೆಳಗ್ಗೆ ಅಭ್ಯಂಗಸ್ನಾನ ಮಾಡಬೇಕು. ವ್ರತಸಂಕಲ್ಪದ ಅನಂತರ ಉತ್ಸವಾಂಗವಾಗಿ ಗಣಪತಿ, ಮಹಾಲಕ್ಷ್ಮೀ, ಸರಸ್ವತೀ ಹಾಗೂ ಕುಲದೇವತೆಯರನ್ನು ಪೂಜಿಸಬೇಕು. ಪೂಜೆಯ ಅಂಗವಾಗಿ ಮೊದಲು ಕಲಶವನ್ನು ಸ್ಥಾಪಿಸಿ ವರುಣ ಪೂಜೆಮಾಡಿ ಬಳಿಕ ಅಕ್ಕಿಯ ಮೇಲೆ ಅಷ್ಟದಳ ಪದ್ಮವನ್ನು ಬರೆದು ಅದರ ಮೇಲೆ ದೇವಿಯ ಪ್ರತಿಮೆಯನ್ನಿಟ್ಟು ಆವಾಹನೆ ಮಾಡಿ ಪೂಜಿಸಬೇಕು. ಈ ದಿವಸಗಳಲ್ಲಿ ಅಖಂಡ ದೀಪವನ್ನು ಹಚ್ಚಿಟ್ಟು ಪುಷ್ಪ ಗಂಧಾಕ್ಷತೆಗಳಿಂದ ನಿತ್ಯವೂ ಅರ್ಚಿಸಿ, ಸಪ್ತಶತಿ ಪಾರಾಯಣವನ್ನು ತಾವೇ ಮಾಡಬೇಕು; ಇಲ್ಲವೇ ಮಾಡಿಸಬೇಕು.

	ಈ ವ್ರತಾಚರಣೆಗೆ ಶುಕ್ರಾಸ್ತಾದಿ ದೋಷಗಣನೆ ಇಲ್ಲ. ಅಧಿಕ ಆಶ್ವಯುಜ ಬಂದಾಗ ಅದನ್ನು ಬಿಟ್ಟು ನಿಜಮಾಸದಲ್ಲೇ ಮಾಡಬೇಕು. ವ್ರತವನ್ನು ಆರಂಭಿಸಿದ ವರ್ಷವನ್ನು ಬಿಟ್ಟು ಉಳಿದ ವರ್ಷಗಳಲ್ಲಿ ಅಶೌಚ ಬಂದರೂ ವ್ರತಾಚರಣೆ ಉಂಟು. ಅಶೌಚ ಕಾಲದಲ್ಲಿ ನಿಯಮಗಳನ್ನು ತಾನು ಪಾಲಿಸಿ ಪೂಜಾದಿಗಳನ್ನು ಅನ್ಯರಿಂದ ಮಾಡಿಸಬೇಕು.

	ದೇವಿಪೂಜೆಯ ಅಂಗವಾಗಿ ಎರಡು ವರ್ಷಗಳಿಗೆ ಮೇಲ್ಪಟ್ಟು ಹತ್ತು ವರ್ಷಗಳೊಳಗಿರುವ ಕನ್ಯೆಯರನ್ನು ಕುಮಾರಿ ತ್ರಿಮೂರ್ತಿ ಕಲ್ಯಾಣಿ ರೋಹಿಣೀಕಾಳೀ ಚಂಡಿಕೆ ಶಾಂಭವೀ ದುರ್ಗಾ ಸುಭದ್ರಾ ಎಂಬ ಹೆಸರಿನಿಂದ ಕ್ರಮವಾಗಿ ಈ ಒಂಬತ್ತು ದಿನಗಳಲ್ಲಿ ಏಕೋತ್ತರವೃದ್ಧಿಯಿಂದ ಪೂಜಿಸಬೇಕು; ಹಸ್ತಪಾದಗಳನ್ನು ತೊಳೆದು ವಸ್ತ್ರ, ಗಂಧ, ಪುಷ್ಪ, ಫಲ, ತಾಂಬೂಲಾದಿಗಳಿಂದ ಪೂಜಿಸಿ ಭಕ್ಷ್ಯಭೋಜ್ಯಪಾಯಸಗಳಿಂದ ತೃಪ್ತಿಪಡಿಸಬೇಕು. ಈ ಕುಮಾರಿಕ ಪೂಜೆಯಿಂದ ದೇವಿ ತೃಪ್ತಳಾಗುತ್ತಾಳೆ.

	ಈ ವ್ರತ ತಿಥಿಹ್ರಾಸ ವೃದ್ಧಿಗಳಿಗೆ ತಕ್ಕಂತೆ 8ರಿಂದ 10 ದಿನಗಳವರೆಗೂ ನಡೆಯುತ್ತದೆ. ದುರ್ಗಾಪೂಜೆ ಸಾತ್ತ್ವಿಕೀ ರಾಜಸೀ ತಾಮಸೀ ಎಂದು ಮೂರು ವಿಧ. ಬ್ರಾಹ್ಮಣರು ಜಪ, ಹೋಮ, ನೈವೇದ್ಯ ಪೂಜಾತ್ಮಕವಾದ ಸಾತ್ತ್ವಿಕೀ ಪೂಜೆಯನ್ನೂ ಕ್ಷತ್ರಿಯ, ವೈಶ್ಯ, ಶೂದ್ರ ವರ್ಣದವರು ಬಲಿದಾನದಿಂದ ಕೂಡಿದ ರಾಜಸೀ ಪೂಜೆಯನ್ನು ಉಳಿದವರು ಜಪ ಹೋಮಾದಿಗಳಿಲ್ಲದ ಅಮಂತ್ರಕವಾದ ಬಲಿದಾನದಿಂದ ಕೂಡಿದ ತಾಮಸೀ ಪೂಜೆಯನ್ನೂ ಮಾಡುತ್ತಾರೆ. ತಾಮಸೀ ಪೂಜೆಯಲ್ಲಿ ಪ್ರಾಣಿಬಲಿ ಮತ್ತು ಸುರೆಯ ನಿವೇದನವನ್ನು ಮಾಡುವುದು ಕೆಲವೆಡೆ ಆಚರಣೆಯಲ್ಲಿದೆ. ಸಾಮಾನ್ಯವಾಗಿ ಪ್ರಾಣಿಬಲಿಗೆ ಪ್ರತಿಯಾಗಿ ಬೂದುಗುಂಬಳಕಾಯನ್ನು ಬಲಿಯಾಗಿ ಕೊಡುವುದು ಹೆಚ್ಚು ಬಳಕೆಯಲ್ಲಿದೆ. ಒಂಬತ್ತು ದಿನಗಳಲ್ಲೂ ದೇವೀಪೂಜೆಯನ್ನು ಮಾಡಲು ಅಶಕ್ತರಾದವರು ಸಪ್ತಮಿಯ ದಿನ ಪ್ರಾರಂಭಿಸಿ ಮೂರು ದಿನಗಳ ಕಾಲ ಮಾತ್ರ ಪೂಜಿಸುತ್ತಾರೆ. ವ್ರತಸಮಾಪ್ತಿಯ ದಿವಸದಲ್ಲಿ ಹೋಮ ಬಲಿದಾನ ದೇವಿಯ ವಿಸರ್ಜನೆ ಪಾರಣೆ-ಈ ನಾಲ್ಕುವಿಧ ಕರ್ಮಗಳು ಉಕ್ತವಾಗಿವೆ. ಸಾತ್ತ್ವಿಕ ಪೂಜೆಯ ಅಂತ್ಯದಲ್ಲಿ ಮಾಷಾನ್ನ ಮತ್ತು ಕೂಷ್ಮಾಂಡವನ್ನು ಬಲಿ ಕೊಡುತ್ತಾರೆ. ಈ ಹಬ್ಬದಲ್ಲಿ ಗಜಾಶ್ವಗಳ ಪೂಜೆಯೂ ವಿಹಿತವಾಗಿದೆ. ಕೆಲವರು ಗೊಂಬೆಗಳನ್ನಿಟ್ಟು ಪೂಜಿಸುವುದುಂಟು. ನವಮಿಯ ದಿನ ಆಯುಧ ವಾಹನಾದಿಗಳನ್ನು ಪೂಜಿಸಬೇಕು. 

	ದಶಮಿಯ ದಿವಸ ರಾಜರಿಗೆ ಸಿಂಹಾಸನ ಛತ್ರ ಚಾಮರ ಖಡ್ಗ-ಇವೇ ಮೊದಲಾದ ರಾಜಚಿಹ್ನೆಗಳ ಪೂಜೆ ವಿಹಿತವಾಗಿದೆ. ಈ ದಿವಸ ಮಧ್ಯಾಹ್ನ ವಿಜಯ ಮುಹೂರ್ತದಲ್ಲಿ ರಾಜರು ಮಂಗಳವಾದ್ಯದೊಡನೆ ಊರಿನ ಎಲ್ಲೆಯನ್ನು ದಾಟಿ ಹೋಗಿ ಈಶಾನ್ಯದಲ್ಲಿರುವ ಬನ್ನಿಯ ಮರವನ್ನು ಪೂಜಿಸಿ ಅದರ ಎಲೆ ಹಾಗೂ ಮಣ್ಣನ್ನು ವಿಜಯದ ಕುರುಹಿಗಾಗಿ ತೆಗೆದುಕೊಂಡು ಹೋಗುತ್ತಾರೆ. ಇತ್ತೀಚಿನವರೆಗೂ ಮೈಸೂರು ಅರಸರ ಈ ವೈಭವದ ಉತ್ಸವ ಲೋಕಪ್ರಸಿದ್ಧವಾಗಿತ್ತು. ಈಗ ಇದನ್ನು ಸರ್ಕಾರವೇ ನಾಡಹಬ್ಬವಾಗಿ ಆಚರಿಸುತ್ತಿದೆ. 											(ಎಸ್.ಎನ್.ಕೆ.)

	ದಸರಾ ಹಬ್ಬದ ದಿನಗಳಲ್ಲಿ ಸುವರ್ಣವನ್ನು ಸ್ವಜನ ಬಾಂಧವರಿಗೆ ಹಂಚುವುದು ಹಿಂದಿನ ಕಾಲದಲ್ಲಿನ ಒಂದು ಧರ್ಮವಿಧಿ. ಸುವರ್ಣ ಹಂಚುವ ಪದ್ಧತಿಯ ರಘುಕುಲದ ಅರಸಾದ ರಘುವಿನ ಜೊತೆಯಲ್ಲೇ ಬೆಳೆದುಬಂದಿದೆ. ಅಲ್ಲಿಂದಲೇ ಶಮೀವೃಕ್ಷದ ಪೂಜೆಯೂ ಮೊದಲಾಯಿತು. ರಘುರಾಜನಿಗೆ ಶಮೀವೃಕ್ಷದಿಂದ ಅಪಾರ ಸುವರ್ಣ ದೊರೆತ ಕಾರಣ ಇಂದಿಗೂ ನಮ್ಮ ನಾಡಿನ ಜನ ಶಮೀ ವೃಕ್ಷವನ್ನು ಪೂಜಿಸಿ ಅದರ ಎಲೆಗಳು ಚಿನ್ನಕ್ಕೆ ಸದೃಶ ಎಂದು ತಿಳಿದು ತಮ್ಮ ಬಂಧು ಬಳಗದಲ್ಲಿ ಹಂಚುವರು.
	ಶಮೀ ಶಮಯತೇ ಪಾಪಂ
	ಶಮೀ ಶತ್ರುವಿನಾಶಿನಂ| 
	ಅರ್ಜುನಸ್ಯ ಧನುರ್ಧಾರೀ 
	ರಾಮಸ್ಯ ಪ್ರಿಯದರ್ಶನಂ||

	ಎಂಬ ಶ್ಲೋಕವನ್ನು ವಿಜಯದಶಮಿಯಂದು ಹೇಳುವ ವಾಡಿಕೆ ಬಂದಿದೆ. ಶಮಿ ವಿಜಯದ ಸಂಕೇತ. ಅದರಿಂದಲೇ `ವಿಜಯದ ಶಮೀ` ಎಂಬ ಹೆಸರು. 

	ಉತ್ತರ ಭಾರತದ ಕೆಲವೆಡೆಗಳಲ್ಲಿ ರಾಮಲೀಲಾ ಉತ್ಸವವನ್ನು ಈ ದಿನಗಳಲ್ಲಿ ಆಚರಿಸಿ ದಶಮಿಯ ದಿವಸ ರಾವಣ ಚಿತ್ರವನ್ನು ಸುಡುತ್ತಾರೆ.

	ಬಂಗಾಳದಲ್ಲಿ ಅತಿ ವಿಜೃಂಭಣೆಯಿಂದ ದುರ್ಗಾಪೂಜೆ ಎಂಬ ಹೆಸರಿನಲ್ಲಿ ಆಚರಿಸುವ ಈ ಹಬ್ಬ ತಾಯಿ ದುರ್ಗೆ ತೌರುಮನೆಗೆ ಮರಳುವುದರ ಸೂಚಕವಾಗಿದೆ. ಐತಿಹ್ಯದ ಪ್ರಕಾರ ಹಿಮವಂತ ತನ್ನ ಪುತ್ರಿ ಉಮೆಯನ್ನು ಶಿವನಿಗೆ ಕೊಟ್ಟು ವಿವಾಹ ಮಾಡಿದ. ವಿವಾಹದ ಬಳಿಕ ಶಿವ ಉಮೆಗೆ ವರ್ಷಕ್ಕೊಮ್ಮೆ ಹತ್ತು ದಿನಗಳು ಮಾತ್ರ ತೌರುಮನೆಗೆ ಹೋಗಿ ಬರಲು ತಿಳಿಸಿದ. ಅದರಂತೆ ನವರಾತ್ರಿಯ ಕಾಲದಲ್ಲಿ ಶಿವ-ಶಿವೆಯರು ತಮ್ಮ ಪುತ್ರರಾದ ಗಣಪತಿ ಮತ್ತು ಷಣ್ಮುಖಸ್ವಾಮಿ ಹಾಗೂ ಪುತ್ರಿಯಾರಾದ ಲಕ್ಷ್ಮೀ ಸರಸ್ವತಿಯವರೊಡನೆ ಭವಯಾತ್ರೆ ಕೈಗೊಳ್ಳುವರು ಎಂಬ ಪ್ರತೀತಿ ಉಂಟು. ಈಗಲೂ ಈ ಹಬ್ಬದಲ್ಲಿ ಮದುವೆಯಾದ ಹೆಣ್ಣು ಮಕ್ಕಳನ್ನು ತಂದೆತಾಯಿಗಳಾದವರು ಮನೆಗೆ ಕರೆತಂದು ಆದರಿಸುವುದನ್ನು ಕಾಣಬಹುದು. 				(ಸಿ.ಕೆ.ವೈ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ